ಅಖಿಲಭಾರತ ಕ್ರೀಡಾಮಂಡಲಿ

	ಭಾರತದಲ್ಲಿ ಕ್ರೀಡಾಭಿವೃದ್ಧಿಯನ್ನು ಸಾಧಿಸಲು ಕೇಂದ್ರಸರ್ಕಾರ 1954ರಲ್ಲಿ ಈ ಮಂಡಲಿಯನ್ನು ಸ್ಥಾಪಿಸಿತು. ಆರಂಭದಲ್ಲಿ ರಾಷ್ಟ್ರೀಯ ಕ್ರೀಡಾಸಂಘಗಳ ಅಧ್ಯಕ್ಷರು ಹಾಗೂ ಕೇಂದ್ರಸರ್ಕಾರದಿಂದ ನಾಮಕರಣ ಹೊಂದಿದ 5 ಕ್ರೀಡಾತಜ್ಞರನ್ನೊಳಗೊಂಡ 25 ಸದಸ್ಯರು ಈ ಮಂಡಲಿಯಲ್ಲಿ ಇದ್ದರು. 1959ರಲ್ಲಿ ಮಂಡಲಿ ಪುನರ್ರಚಿಸಲ್ಪಟ್ಟು ಇದರಲ್ಲಿನ 15 ಸದಸ್ಯರು ಸರ್ಕಾರದಿಂದ ನಾಮಕರಣ ಹೊಂದಿದವರಾಗಿದ್ದರು.

	ದೇಶದಲ್ಲಿ ಕ್ರೀಡಾಭಿವೃದ್ಧಿಗಾಗಿ ಭಾರತ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವುದು, ವಿವಿಧ ಆಟಗಳ ಮಟ್ಟವನ್ನು ಉತ್ತಮಗೊಳಿಸಲು ರಾಷ್ಟ್ರೀಯ ಕ್ರೀಡಾಸಂಘಗಳಿಗೆ ಸಲಹೆ ಹಾಗೂ ಸಹಾಯವನ್ನೊದಗಿಸುವುದು, ಕ್ರೀಡಾಸಂಘಗಳಿಗೆ ಆರ್ಥಿಕ ನೆರವನ್ನು ಕೊಡಲು ಭಾರತ ಸರ್ಕಾರಕ್ಕೆ ಶಿಫಾರಸು ಮಾಡುವುದು ಕ್ರೀಡಾಂಗಣಗಳ ರಚನೆ, ಉತ್ತಮ ಕ್ರೀಡೋಪಕರಣಗಳನ್ನು ಒದಗಿಸುವುದು, ಹಾಗೂ ವಿವಿಧ ಆಟಗಳಲ್ಲಿ ತರಬೇತಿ ಶಿಬಿರಗಳನ್ನೇರ್ಪಡಿಸುವುದು - ಇವೇ ಮೊದಲಾದವುಗಳಿಗೆ ಧನಸಹಾಯ ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು, ವಿದೇಶಗಳಿಗೆ ಭಾರತದ ಆಟಗಾರರ ಪಂಗಡಗಳನ್ನು ಕಳುಹಿಸಲು ಮತ್ತು ವಿದೇಶಗಳಿಂದ ಆಟದ ತಂಡಗಳು ದೇಶದಲ್ಲಿ ಸಂಚಾರ ಕೈಕೊಂಡಾಗ ತಗಲುವ ವೆಚ್ಚದ ಮೇಲೆ ಯೋಗ್ಯ ನಿರ್ಬಂಧಗಳನ್ನಿಡುವುದು, ದೇಶದ ಖ್ಯಾತ ಕ್ರೀಡಾಪಟುಗಳಿಗೆ ಪದ್ಮಶ್ರೀ, ಪದ್ಮಭೂಷಣ, ಅರ್ಜುನಪ್ರಶಸ್ತಿ ಮುಂತಾದುವುಗಳನ್ನು ನೀಡುವಾಗ ಯೋಗ್ಯ ಆಟಗಾರರ ಹೆಸರುಗಳನ್ನು ಸೂಚಿಸುವುದು - ಇವೇ ಮಂಡಲಿಯ ಕಾರ್ಯಗಳಲ್ಲಿ ಪ್ರಮುಖವಾದವುಗಳೆನ್ನಬಹುದು.

	ಇದು ಕೇವಲ ಸಲಹಾಮಂಡಲಿಯಾಗಿದ್ದು ಇದಕ್ಕೆ ತನ್ನದೇ ಆದ ಯಾವ ನಿಧಿಯೂ ಇರುವುದಿಲ್ಲ. ರಾಷ್ಟ್ರೀಯ ಕ್ರೀಡಾಸಂಘಗಳಾಗಲೀ ರಾಜ್ಯ ಕ್ರೀಡಾಮಂಡಲಿಗಳಾಗಲೀ ಇಲ್ಲವೆ ಇತರ ಕ್ರೀಡಾಸಂಸ್ಥೆಗಳಾಗಲೀ ಆರ್ಥಿಕ ನೆರವಿಗಾಗಿ ಭಾರತ ಸರ್ಕಾರಕ್ಕೆ ವಿನಂತಿ ಪತ್ರ ಕಳುಹಿಸಿದಾಗ ಅವನ್ನು ಮಂಡಲಿ ವಿಮರ್ಶಿಸಿ ಸಲಹೆ ನೀಡುತ್ತದೆ. ಅದರ ಸಲಹೆಯ ಮೇರೆಗೆ ಸರ್ಕಾರ ವಿದ್ಯಾಖಾತೆಯ ಮೂಲಕ ಧನಸಹಾಯವನ್ನೊದಗಿಸುತ್ತದೆ.

	ದೇಶ ಉತ್ತಮ ಕ್ರೀಡಾಪಟುಗಳನ್ನು ಹೊಂದಬೇಕಾದರೆ ತರುಣ ಆಟಗಾರರಿಗೆ ವೈಜ್ಞಾನಿಕ ತಳಹದಿಯ ಮೇಲೆ ಆಟದ ಶಿಕ್ಷಣವನ್ನೀಯುವುದು ಅತ್ಯಾವಶ್ಯಕವೆಂಬುದನ್ನು ಮನಗಂಡು ಈ ಮಂಡಲಿಯ ಸಲಹೆಯಂತೆ ಪಟಿಯಾಲದಲ್ಲಿ ರಾಷ್ಟ್ರೀಯ ಕ್ರೀಡಾ ತರಬೇತಿ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಅಲ್ಲಿ ತರಬೇತಿಹೊಂದಿದ ಅನುಭವಶಾಲಿ, ಶಿಕ್ಷಕರು ದೇಶದಾದ್ಯಂತ ಉತ್ತಮಕಾರ್ಯ ಮಾಡುತ್ತಿದ್ದಾರೆ.

	ದೇಶದಲ್ಲಿ, ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ, ಆಟ ಮತ್ತು ಮನೋರಂಜನೆಯ ಚಟುವಟಿಕೆಗಳು ಪ್ರಗತಿಪರವಾಗಿ ಸಾಗಬೇಕಾದರೆ ಆಟದ ಬಯಲುಗಳು ಅತ್ಯಾವಶ್ಯಕ. ಅಖಿಲಭಾರತ ಕ್ರೀಡಾಮಂಡಲಿಯ ನೇತೃತ್ವದಲ್ಲಿ ರಚಿಸಲ್ಪಟ್ಟ ಉಪಸಮಿತಿಗಳು ಆಟದ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ಸಿದ್ಧಪಡಿಸಿವೆ. ವಿದ್ಯಾಸಂಸ್ಥೆಗಳಿಗೂ ಇತರ ಸಂಘಗಳಿಗೂ ಕ್ರೀಡಾಂಗಣಗಳನ್ನು ಒದಗಿಸುವುದು ಈ ಯೋಜನೆಗಳಲ್ಲೊಂದಾಗಿದೆ. ಅಂತಿಮವಾಗಿ ರಾಷ್ಟ್ರೀಯ ಕ್ರೀಡಾಂಗಣ ಸಂಘವನ್ನು ರಚಿಸುವುದೇ ಇದರ ಮುಖ್ಯ ಗುರಿಯಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರದಲ್ಲಿರುವ ದೇಶೀಯ ಕ್ರೀಡಾಚಟುವಟಿಕೆಗಳನ್ನು ಊರ್ಜಿತಗೊಳಿಸಲು, ಗ್ರಾಮನಿವಾಸಿಗಳಿಗೆ ಮನೋರಂಜನೆ ಒದಗಿಸಿ ಜನಜೀವನದಲ್ಲಿ ಸಂತಸದ ಕಳೆ ತುಂಬಲು ಗ್ರಾಮೀಣ ಕ್ರೀಡಾಕೇಂದ್ರಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ತೆರೆಯುವಂತೆ ಒಂದು ಯೋಜನೆಯನ್ನು ಇತ್ತೀಚೆಗೆ ಅನುಷ್ಠಾನಕ್ಕೆ ತರಲಾಗಿದೆ.

	ಈ ಮಂಡಲಿಯ ಸಲಹೆಯ ಮೇರೆಗೆ, ರಾಜ್ಯಕ್ರೀಡಾಮಂಡಲಿಗಳನ್ನೂ ಜಿಲ್ಲಾ ಕ್ರೀಡಾಮಂಡಲಿಗಳನ್ನೂ ಜಿಲ್ಲಾ ಕ್ರೀಡಾಮಂಡಲಿಗಳನ್ನೂ ದೇಶದಲ್ಲೆಲ್ಲ ಸ್ಥಾಪಿಸಲಾಗಿದ್ದು ಈ ಸಂಸ್ಥೆಗಳು ಕ್ರೀಡಾಭಿವೃದ್ಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಿದೆ.

	ಉತ್ತಮ ಶ್ರೇಣಿಯ ಉಪಕರಣಗಳು ಕ್ರೀಡಾಭಿವೃದ್ಧಿಯಲ್ಲಿ ಪ್ರಮುಖಪಾತ್ರವಹಿಸುತ್ತದೆ. ಇದನ್ನು ಮನಗಂಡು ಭಾರತ ಸರ್ಕಾರದ ಯೋಗ್ಯಯತಾ ನಿಷ್ಕರ್ಷಕ ಇಲಾಖೆಯ ಹಾಗೂ ದೇಶದ ಕ್ರೀಡೋಪಕರಣಗಳ ಉದ್ದಿಮೆಗಾರರ ಸಹಕಾರದಿಂದ, ವಿದ್ಯಾಸಂಸ್ಥೆ ಮತ್ತು ಇತರ ಕ್ರೀಡಾಸಂಘಗಳಿಗೆ ಶ್ರೇಷ್ಠದರ್ಜೆಯ ಉಪಕರಣಗಳು ಯೋಗ್ಯ ಬೆಲೆಗೆ ಸಿಗುವಂತೆ ಮಾಡಲು ಪ್ರಯತ್ನಿಸಲಾಗಿದೆ.

	ಅಖಿಲಭಾರತ ಕ್ರೀಡಾಮಂಡಲಿ ನೇಮಿಸಿದ ವಿಶೇಷ ಯೋಜನಾ ಸಮಿತಿ 1966ರಲ್ಲಿ ದೇಶದ ಪ್ರಮುಖ ಕೇಂದ್ರಗಳನ್ನು ಸಂದರ್ಶಿಸಿ, ತಜ್ಞರೊಡನೆ ಹಾಗೂ ಅಧಿಕಾರಿಗಳೊಡನೆ ಸಮಾಲೋಚಿಸಿ ಒಂದು ಬೃಹದ್ಯೋಜನೆಯನ್ನು ನಿರ್ಮಿಸಿದೆ. ಅದರಲ್ಲಿಯ ಮಹತ್ವದ ಸೂಚನೆಗಳನ್ನು ಮಂಡಲಿ ಕೆಂದ್ರಸರ್ಕಾರಕ್ಕೆ ಕಳುಹಿಸಿದ್ದು ಅವು ಸರ್ಕಾರದ ಪರಿಶೀಲನೆಯಲ್ಲಿವೆ. ಅವು ಕಾರ್ಯಗತವಾದಲ್ಲಿ ಕ್ರೀಡಾಮಟ್ಟ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ.					
(ಸಿ.ಎ.ಕೆ.)